ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ವಿರೋಧಿಸಿ ಶಾಂತಿಯುತ ಪ್ರತಿಭಟನೆ.
ಮಧುಗಿರಿ - ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ ಮತ್ತು ಧರ್ಮಧಿಕಾರಿಗಳಾದ ಡಿ.ವಿರೇಂದ್ರ ಹೆಗ್ಗಡೆಯವರ ಮೇಲೆ ಅಪಪ್ರಚಾರ ಮತ್ತು ಷಡ್ಯಂತ್ರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಶುಕ್ರವಾರ ಶಾಂತಿಯುತ ಪ್ರತಿಭಟನೆ ಮಾಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್ ತಿಳಿಸಿದರು.
ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು ಒಂದು ದಶಕಗಳಿಂದ ಶ್ರೀ ಕ್ಷೇತ್ರದ ಕುರಿತಾಗಿ ಹಾಗೂ ಪೂಜ್ಯ ಧರ್ಮಾಧಿಕಾರಿಯವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆಧಾರ ರಹಿತವಾಗಿ ಷಡ್ಯಂತರ ಮುಖೇನ ಅಪಪ್ರಚಾರವನ್ನು ಮಾಡಿಕೊಂಡು ಬರುತ್ತಿರುವುದು ಖಂಡನೀಯ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ, ಗೀರೀಶ್ ಮಟ್ಟಣ್ಣನವರ್ ಮತ್ತು ಎಂಡಿ ಸಮೀರ್ ಎಂಬುವವರು ಸಾಕ್ಷಿ ರಹಿತ ಆರೋಪ ಮಾಡುತ್ತಾ ರಾಜ್ಯದ ಜನರ ಹಾಗೂ ಸರ್ಕಾರದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಇಂತಹವರಿಗೆ ಹಾಗೂ ಇವರ ಹಿಂದೆ ಪಿತೂರಿ ನಡೆಸುವವರ ವಿರುದ್ದ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಂಡು ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಬೇಕೆಂದು ಒತ್ತಾಯಿಸಿ ಮಧುಗಿರಿ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ವತಿಯಿಂದ ಅ.೨೨ ರ ಶುಕ್ರವಾರ ಪಟ್ಟಣದ ತುಮಕೂರು ಗೇಟ್ನಿಂದ ಡೂಮ್ಲೈಟ್ ವೃತ್ತದ ಮಾರ್ಗವಾಗಿ ಉಪವಿಭಾಗಾಧಿಕಾರಿಯವರ ಕಚೇರಿಯವರೆಗೂ ಜಾಥಾ ಮುಖೇನ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸ ಮೂರ್ತಿ ಮಾತನಾಡಿ ಕೆಲವು ಪಟ್ಟಭದ್ರಹಿತಾಶಕ್ತಿಗಳು ಶ್ರೀ ಕ್ಷೇತ್ರದ ಪರ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು, ಮಾನ್ಯ ಉಚ್ಚ ನ್ಯಾಯಾಲಯದ ಆದೇಶವನ್ನು ಮೀರಿ ಅಪಪ್ರಚಾರದಲ್ಲಿ ತೋಡಗಿದ್ದಾರೆ. ಪ್ರಸ್ತುತ ಎಸ್ ಐ ಟಿ ತನಿಕೆ ಸಂದರ್ಭದಲ್ಲೂ ಕೂಡ ಅಪಪ್ರಚಾರ ಮುಂದುವರಿಸುವುದರ ಜೊತೆಗೆ ಅನಾಮಿಕ ವ್ಯಕ್ತಿಯನ್ನು ಬಳಸಿ ಹಣದ ಅಮಿಷ ಒಡ್ಡಿ ಎಸ್ ಐ ಟಿ ತನಿಕೆಯ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಕೈವಾಡದ ಶಂಕೆ ಇದ್ದು, ಈ ಬಗ್ಗೆ ಸೂಕ್ತ ರೀತಿಯಲ್ಲಿ ಪಾರದರ್ಶಕ ತನಿಖೆ ಆಗಬೇಕು ಹಾಗೂ ಸತ್ಯ ಸತ್ಯತೆ ಹೊರಬರಲು ಸಹಕಾರ ನೀಡಬೇಕು ಎನ್ನುವ ಸಲುವಾಗಿ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಪ್ರತಿಭಟನೆಗೆ ಬೆಂಬಲ
ಪ್ರತಿಭಟನೆಗೆ ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಹಕಾರ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ, ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹಾಗೂ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಘೋಷಿಸಿದ್ದು, ಸಿದ್ದರಬೆಟ್ಟದ ಶ್ರೀ ವೀರಭದ್ರ ಸ್ವಾಮೀಜಿ, ಎಲೆರಾಂಪುರ ಕ್ಷೇತ್ರ ಹನುಮಂತನಾಥ ಸ್ವಾಮೀಜಿ, ತಗ್ಗಿಹಳ್ಳಿ ಕ್ಷೇತ್ರದ ಶ್ರೀ ರಮಾನಂದ ಚೈತನ್ಯ ಸ್ವಾಮೀಜಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಿಸ್ಟೆಲ್ ಮಂಜುನಾಥ್, ರವಿಶಂಕರ್ ಹಾಗೂ ಮುಂತಾದವರು ಇದ್ದರು.